ಜಾದು
ಪ್ರಕೃತಿಯನ್ನೂ ಭೂತ ಪ್ರೇತಾದಿಗಳನ್ನೂ ಕೆಲವಾರು ಶಕ್ತಿ ದ್ಯೆವಗಳನ್ನೂ ರಹಸ್ಯ ರೀತಿಯಲ್ಲಿ ಅಧೀನದಲ್ಲಿಟ್ಟುಕೊಂಡು ಸನ್ನಿವೇಶಗಳಿಗೆ ತಕ್ಕಂತೆ ಘಟನೆಗಳ ಗತಿಯನ್ನು ಮಾರ್ಪಡಿಸುವ ಒಂದು ವಿದ್ಯೆ (ಮ್ಯಾಜಿಕ್). ಅನ್ಯ ದೇಶೀಯ ಪದವಾದ ಜಾದು ಎಂಬುದನ್ನು ಕನ್ನಡದಲ್ಲಿ ಇಂದ್ರಜಾಲ, ಮಾಯಾ ವಿದ್ಯೆ, ಕಣ್ಣುಕಟ್ಟು ವಿದ್ಯೆ, ಯಕ್ಷಿಣಿ ಎಂದು ಮುಂತಾಗಿಯೂ ಕರೆಯುವುದುಂಟು. ಪಿಶಾಚಿಗಳನ್ನು ಕೈವಶ ಮಾಡಿಕೊಂಡು ಕೆಟ್ಟ ಉದ್ದೇಶ ಸಾಧನೆಗಾಗಿ ನಡೆಸುವ ಕೆಲಸವನ್ನು ಮಾಟವೆಂತಲೂ (ಬ್ಲ್ಯಾಕ್ ಮ್ಯಾಜಿಕ್) ಸದುದ್ದೇಶಗಳ ಸಾಧನೆಗಾಗಿ ಶಕ್ತಿದೈವಗಳನ್ನು ಕೈವಶ ಮಾಡಿಕೊಂಡು ಮಾಡುವ ಕೆಲಸವನ್ನು ಒಳ್ಳೆಯ ಮಾಟ (ಹ್ವೈಟ್ ಮ್ಯಾಜಿಕ್) ಎಂತಲೂ ಯಾವ ವ್ಯಕ್ತಿಯ ಸಹಾಯವೂ ಇಲ್ಲದೆ ಸ್ವಾಭಾವಿಕವಾಗಿ ಪ್ರಕೃತಿಯನ್ನು ಅಧೀನದಲ್ಲಿಟ್ಟುಕೊಂಡು ನಡೆಸುವ ಕೆಲಸವನ್ನು ಕಣ್ಣುಕಟ್ಟು ವಿದ್ಯೆಯೆಂದೂ (ನ್ಯಾಚುರಲ್ ಮ್ಯಾಜಿಕ್) ಕರೆಯುತ್ತಾರೆ. ಸದುದ್ದೇಶಸಾಧನೆಗಾಗಿ ಸ್ವಾಭಾವಿಕವಾಗಿ ಇಂದ್ರಜಾಲವನ್ನು ಮಾಡುವವನನ್ನು ಐಂದ್ರಜಾಲಿಕ, ಗಾರುಡಿಗ (ಮಜಿಷನ್) ಎಂದು ಕರೆಯಲಾಗುತ್ತದೆ. ದುರುದ್ದೇಶವನ್ನು ಸಾಧಿಸಲೆಂದೇ ವಾಮಾಚಾರ, ಮಾರಣ ಮುಂತಾದ ದುಷ್ಕøತ್ಯಗಳನ್ನು ನಡೆಸುವವನಿಗೆ ಮಂತ್ರವಾದಿ, ಮಾಟಗಾರ (ವಿಚ್) ಎಂದು ಹೆಸರು. ಮಂತ್ರ-ತಂತ್ರಗಳಿಂದ ಮತ್ತು ಇನ್ನಿತರ ದುಷ್ಟಶಕ್ತಿಗಳನ್ನು ಕೈವಶ ಮಾಡಿಕೊಂಡು ಎದುರಾಳಿಗಳನ್ನು ಎದುರಿಸಿ ಅವರನ್ನು ಗೆಲ್ಲುವುದು ಮೋಡಿ ವಿದ್ಯೆ ಎನಿಸಿಕೊಳ್ಳುತ್ತದೆ. (ನೋಡಿ- ಜನಪದ-ಮೋಡಿಕಾರರು) ಇಂಥ ಮೋಡಿ ಆಟಗಳಾಗಲೀ ಜಾದೂ ಆಟಗಳಾಗಲೀ ಭಾರತದಲ್ಲಿ ಮಾತ್ರವಲ್ಲದೆ ಪ್ರಾಚೀನ ಪರ್ಷಿಯ ಮುಂತಾದ ದೇಶಗಳಲ್ಲೂ ಇದ್ದಿತೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಜರತುಷ್ಟ್ರ ಮತಾನುಯಾಯಿಗಳ ನಂಬಿಕೆಯ ರೀತ್ಯ ಕೆಟ್ಟದಕ್ಕೆಲ್ಲ ಅಧಿದೈವವಾದ ಅಹ್ರಿಮನ್ (ಅಂಗ್ರಮೈನ್ಯು) ಎಂಬುವನಿಗೆ ಬಲಿ ಕೊಡುವುದು, ಆತ್ಮಾರ್ಪಣೆ ಮಾಡಿಕೊಳ್ಳುವುದು ಮುಂತಾದವುಗಳಿಂದಾಗಿ ಆತನನ್ನು ಕೈವಶ ಮಾಡಿಕೊಂಡು ದುರುದ್ದೇಶಗಳನ್ನು ಸಾಧಿಸುವ ಕ್ರಮವಾದ ಮಾಟವನ್ನು (ಸಾರ್ಸರಿ) ಹೆಚ್ಚು ಹೆಚ್ಚು ಜನ ಕಲಿತರು. ಕ್ರಮೇಣ ಇಂಥ ವಿದ್ಯೆಯನ್ನು ಮನೋರಂಜನೆಗೂ ಬಳಸಲು ಅನುಕೂಲವಾಗುವಂತೆ ಮಾರ್ಪಡಿಸಿಕೊಂಡು ಮೋಜಿಗಾಗಿಯೂ ಹಲವಾರು ಕಡೆ ಪ್ರದರ್ಶಿಸಲಾಯಿತು. ಇಂಥ ಪ್ರದರ್ಶನಗಳಿಗೆ ಹಣದ ಗಳಿಕೆಯೂ ಒಂದು ಉದ್ದೇಶವಾಯಿತು. ಪೌರಸ್ತ್ಯ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಜಾದುವಿದ್ಯೆ ಇತ್ತೀಚೆಗೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತ್ತಿದೆ.

	ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿಯೂ ಇಂದ್ರಜಾಲದ ಉಲ್ಲೇಖವಿದೆ. ಇಂದ್ರಜಿತು, ರಾವಣ ಮುಂತಾದವರು ಮಾರಣ (ಮಾಟ) ಮಾಡಿ ಶತ್ರುಗಳನ್ನು ದುರ್ಬಲಗೊಳಿಸುತ್ತಿದ್ದರು. ಕನಕನೆಂಬ ಒಬ್ಬ ಬ್ರಾಹ್ಮಣನ ಮೂಲಕ ಕೌರವ ಪಾಂಡವರಿಗೆ ಮಾಟ ಮಾಡಿಸಿದ್ದನಂತೆ. ಆದರೆ ಅದು ಫಲಕಾರಿಯಾಗಲಿಲ್ಲ. ಕೆಟ್ಟ ಉದ್ದೇಶಕ್ಕಾಗಿ ಪ್ರಯೋಗಿಸಿದ ಮಾಟ ಕೆಲವೊಮ್ಮೆ ಪ್ರಯೋಗ ಮಾಡಿದವರನ್ನೇ ಬಲಿ ತೆಗೆದುಕೊಳ್ಳುವುದುಂಟು ಎಂದು ಹೇಳಲಾಗಿದೆ.

	ತಂತ್ರ ಶಾಸ್ತ್ರ (ನೋಡಿ- ತಂತ್ರಶಾಸ್ತ್ರ) ಎಂಬ ವೇದೋಕ್ತವಾದ ಶಾಸ್ತ್ರ ವಿಶೇಷವೊಂದಿದೆ. ಈಗಲೂ ಕೆಲವೊಂದು ದೇವಾಲಯಗಳಲ್ಲಿ ತಂತ್ರೋಕ್ತವಾಗಿಯೇ ಪೂಜಾದಿಗಳು ನಡೆಯುತ್ತಿವೆ. ಮಾಟ, ಮಾರಣಗಳಲ್ಲಿ ಈ ತಂತ್ರೋಕ್ತ ಕ್ರಮ ಬಹಳಷ್ಟು ಬಳಕೆಯಲ್ಲಿದೆ.

	ಅನೇಕ ವಿದ್ಯಮಾನಗಳು ಉಪಾಯಗಳಿಂದಲೇ ಪ್ರಕಟಗೊಳ್ಳುವಲ್ಲಿ, ಅಲ್ಲಿ ಅನುಸರಿಸುವ ವಿಧಾನ ಮರೆಗೊಂಡು, ಪರಿಣಾಮ ಮಾತ್ರ ವ್ಯಕ್ತಗೊಳ್ಳುತ್ತದೆ. ಕಾರಣ ಗೊತ್ತಾಗದೆ, ಕಾರ್ಯ ಮಾತ್ರ ಪ್ರಕಟಗೊಂಡಾಗ ಪರಿಣಾಮ ಅದ್ಭುತಗೊಳ್ಳುತ್ತದೆ. ಪವಾಡಗಳೆಂಬ ಅದ್ಭುತಗಳಲ್ಲಿ ಇಂಥ ಉಪಾಯಗಳು ವಿಶೇಷವಾಗಿ ನಡೆಯುತ್ತವೆ. ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಇತರರ ಬುದ್ಧಿಶಕ್ತಿಗೆ ಸವಾಲನ್ನು ಒಡ್ಡುವಂತೆ ಪವಾಡಗಳನ್ನು ನಡೆಸುವುದು ಒಂದು ರೀತಿಯ ತಂತ್ರವೆನ್ನಬಹುದು. ತಂತ್ರದ ಯಾವುದೇ ಕ್ರಮ ಶಾಸ್ತ್ರೋಕ್ತವಾಗಿಲ್ಲ. ಕೇವಲ ಬುದ್ಧಿಶಕ್ತಿಯ ಪ್ರಭಾವದಿಂದ, ಅಭ್ಯಾಸದ ನೈಪುಣ್ಯದಿಂದ ತಂತ್ರ ಸಾಧಿಸಲ್ಪಡುತ್ತದೆ.

	ಯಾವುದೋ ಒಂದು ದುಷ್ಪಶಕ್ತಿಯ ಪೀಡೆಯ ವಿರುದ್ದವೋ ರೋಗರುಜುನಾದಿಗಳಿಂದ ವಿಮುಕ್ತಿ ಹೊಂದಲೋ ತಾಯಿತ ಧಾರಣೆ ಮಾಡಿಕೊಳ್ಳುವ ಒಂದು ಪದ್ಧತಿ ಅನೇಕ ಕಡೆ ಪ್ರಚಲಿತವಾಗಿರುವುದನ್ನು ಇಂದೂ ಕಾಣಬಹುದು. ಯಾವನೋ ಒಬ್ಬ ಮಂತ್ರವಾದಿ ಯಾವುದೇ ಒಂದು ತಗಡಿನ ಮೇಲೆ, ಕೆಲವೊಂದು ರೇಖೆಗಳನ್ನೂ ಅಕ್ಷರಗಳನ್ನೂ ಕೆತ್ತಿ ಚಿತ್ರಿಸಿ ಇಂಥ ತಾಯಿತಗಳಲ್ಲಿಟ್ಟು ರಕ್ಷೆ ಮಾಡಿ ಕುತ್ತಿಗೆಗೋ ತೋಳಿಗೋ ಕಟ್ಟುವುದಿದೆ. ಇವನ್ನು ಯಂತ್ರಗಳೆಂದು ಹೇಳುತ್ತಾರೆ. ಹೀಗೆ ಮಂತ್ರಗಳಾಗಲಿ, ತಂತ್ರಗಳಾಗಲಿ, ಯಂತ್ರಗಳಾಗಲಿ ಎಲ್ಲವೂ ಮನುಷ್ಯನ ಅಧಿಕತರವಾದ ನೈಪುಣ್ಯವನ್ನು ಪ್ರದರ್ಶಿಸುತ್ತವೆ. ಇಲ್ಲಿ ಆ ನೈಪುಣ್ಯಕ್ಕಿಂತ ಕಡಿಮೆಯಾದುದರ ಮೇಲೆ ಪರಣಾಮ ಬೀರುತ್ತವೆ.

	ತುಂತುರು ಹನಿಗಳ ಮೇಲೆ ಸೂರ್ಯರಶ್ಮಿ ಬಿದ್ದಾಗ ಆಕಾಶದಲ್ಲಿ ಇಂದ್ರ ಚಾಪ(ಕಾಮನ ಬಿಲ್ಲು) ಕಂಗೊಳಿಸುತ್ತದೆ. ಬಿಲ್ಲಿಗೆ ಸಂಬಂಧಪಟ್ಟದ್ದು ಯಾವುದೂ ಅದರಲ್ಲಿಲ್ಲವಾದರೂ ಅದು ಬಿಲ್ಲಿನ ಹಾಗೆ ತೋರುತ್ತದೆ. ಹಾಗೆಯೇ ವಸ್ತು ಸಾಮಗ್ರಿಗಳ ಅಸ್ತಿತ್ವಕ್ಕೂ ಪರಿಣಾಮಕ್ಕೂ ಬೇಕಾಗುವ ಕಾರಣ ಪ್ರಭಾವಗಳನ್ನು ಗೋಚರವಾಗದಂತೆ ಮರೆಪಡಿಸುವ ವಿಶೇಷತೆಯನ್ನು ಇಂದ್ರಜಾಲದಲ್ಲಿ ಕಾಣಬಹುದು. ಯಕ್ಷಿಣಿವಿದ್ಯೆ ಐಂದ್ರಜಾಲಿಕನಿಗೆ ಗೊತ್ತಿರುವ ಇನ್ನೊಂದು ವಿಧಾನ. ಮಂತ್ರದಿಂದಲೂ ತಂತ್ರದಿಂದಲೂ ಯಂತ್ರದಿಂದಲೂ ಅದ್ಭುತ ವಿಶೇಷಗಳನ್ನು ವ್ಯಕ್ತಗೊಳಿಸುವಂತೆ, ಯಕ್ಷಿಣಿವಿದ್ಯೆಯಿಂದಲೂ ತಾತ್ಕಾಲಿಕವಾದ ಅದ್ಭುತಗಳನ್ನು, ವಿಶೇಷಗಳನ್ನು ಕಾಣಿಸಬಹುದು. ಸಮರ್ಥನಾದ ಐಂದ್ರಜಾಲಿಕನ ಪ್ರದರ್ಶನವನ್ನು ನೋಡಿ ಅನೇಕರು ಅವನಿಗೆ ಯಾವುದೋ ಮಂತ್ರಸಿದ್ಧಿಯಿದೆ ಎಂದು ಮುಂತಾಗಿ ಆಡಿಕೊಳ್ಳುವುದುಂಟಾದರೂ ನಿಜವಾದ ಜಾದುಗಾರ ಅದಾವುದನ್ನೂ ಬಳಸುವುದಿಲ್ಲ. ಕೇವಲ ಬುದ್ಧಿಶಕ್ತಿಯಿಂದ ನಾನಾವಿಧವಾದ ಸಂಶೋಧನೆಯನ್ನು ಮಾಡಿ, ತನ್ನ ನೈಪುಣ್ಯವನ್ನು ಸಾರ್ವಜನಿಕರಿಗೆ ವ್ಯಕ್ತಪಡಿಸುತ್ತಾನೆ. ಕೆಲವು ವೇಳೆ ಅಸಾಮಾನ್ಯ ಪ್ರಸಂಗಗಳನ್ನೂ ಪ್ರದರ್ಶಿಸಿ ಜನರ ಮನರಂಜಿಸುವುದುಂಟು. ಉದಾ: ಕಾಗದ ತುಂಡನ್ನು ಕರೆನ್ಸಿ ನೋಟನ್ನಾಗಿ ಪರಿವರ್ತಿಸುವುದು. ಒಂದು ಕಾಗದದ ತುಂಡನ್ನೂ ಕರೆನ್ಸಿ ನೋಟನ್ನೂ ಎರಡನ್ನೂ ನೋಟಕರು ನೋಡುತ್ತಾರೆ. ಬರೀ ಕಾಗದ ಹೇಗೆ ನೋಟಾಗಿ ಪರಿವರ್ತನೆಯಾಯಿತು ಎಂಬುದು ಮಾತ್ರ ಗೊತ್ತಾಗುವುದಿಲ್ಲ. ಹಾಗೆ ತೋರಿಸುವುದು ಜಾದು ವಿದ್ಯೆ; ಗೊತ್ತಾಗದಿರುವುದೇ ಯಕ್ಷಿಣೀವಿದ್ಯೆ. ಅಸಂಭಾವ್ಯವಾದುದನ್ನು ಕಾಣಿಸುವುದೇ ಐಂದ್ರಜಾಲಿಕನ ಸಾಮಥ್ರ್ಯ. ಇದೇ ರೀತಿ ಗಾಳಿಯಲ್ಲಿ ಮನುಷ್ಯರನ್ನು ತೇಲಾಡಿಸುವುದು, ಹುಡುಗಿಯೊಬ್ಬಳನ್ನು ವಿದ್ಯುದ್‍ಗರಗಸದಿಂದ ಎರಡಾಗಿ ತುಂಡರಿಸುವುದು-ಮೊದಲಾದವನ್ನು ಇತ್ತೀಚಿನ ಜಾದುಗಾರರು ಮಾಡಿ ತೋರಿಸುತ್ತಾರೆ.

	ಜಾದು ಪ್ರದರ್ಶನವನ್ನು ನೋಡುವ ಪ್ರೇಕ್ಷಕರಲ್ಲಿ ಬಹುಮಂದಿಗೆ ಜಾದುಗಾರ ಏನನ್ನು ಕಾಣಿಸುತ್ತಾನೆ ಎಂಬುದನ್ನು ನೋಡುವ ಕುತೂಹಲವೇ ಹೆಚ್ಚಾಗಿ ಇರುತ್ತದೆ. ಹಾಗಾಗಿ ಹೇಗೆ ಕಾಣಿಸಿದ ಎಂಬ ಪರಿಜ್ಞಾನ ಇರುವುದಿಲ್ಲ. ಇಂಥ ಕುಶಲಪ್ರಯೋಗಗಳು ಪರಿಣಾಮದ ಅದ್ಭುತವನ್ನೋ ವಿಶೇಷವನ್ನೋ ವ್ಯಕ್ತಗೊಳಿಸುವುದಕ್ಕಾಗಿಯೇ ಇರುವುದರಿಂದ ಆ ನಿರೀಕ್ಷೆಯಲ್ಲಿರುವ ಪ್ರೇಕ್ಷಕರು ಆ ನೋಟದಲ್ಲೇ ಮಗ್ನರಾಗಿಬಿಡುತ್ತಾರೆ. ಅವರ ದೃಷ್ಟಿಯನ್ನು ತನ್ನ ಕೌಶಲ್ಯದ ಪರಿಣಾಮದಿಂದ ಆ ನಿರೀಕ್ಷೆಯೊಂದಿಗೆ ಕುತೂಹಲಪೂರ್ಣವಾಗಿ, ಕೇಂದ್ರೀಕೃತವಾಗಿ ನಿಲ್ಲಿಸುವ ಸಾಧನೆ ಐಂದ್ರಜಾಲಿಕನಲ್ಲಿರುತ್ತದೆ.

	ಭಾರತ ಇಂದ್ರಜಾಲವಿದ್ಯೆಯ ತವರೂರೆನಿಸಿದೆ. ಇಂಡಿಯನ್ ಬ್ಯಾಸ್ಕೆಟ್ ಟ್ರಿಕ್, ಇಂಡಿಯನ್ ಮ್ಯಾಂಗೋ ಟ್ರಿಕ್, ಇಂಡಿಯನ್ ರೋಪ್ ಟ್ರಿಕ್ ಎಂಬ ಹೆಸರುಳ್ಳ ಭಾರತೀಯ ಕಣ್ಣುಕಟ್ಟು ಪ್ರದರ್ಶನಗಳು ಪ್ರಪಂಚದ ಇನ್ನಿತರ ಜಾದುಗಾರರಿಗೆ ಇನ್ನೂ ಸಮಸ್ಯಾತ್ಮಕವಾಗಿಯೇ ಇವೆ. ಯಕ್ಷಿಣಿಗಾರರು ಜನಸಂಚಾರ ಹೆಚ್ಚಿರುವೆಡೆ ಅದರಲ್ಲೂ ರಸ್ತೆ ಬದಿಯಲ್ಲಿ ಸಾಮಾನ್ಯವಾದ ಹಗ್ಗವೊಂದನ್ನು ನೆಲದ ಮೇಲಿಟ್ಟು ಪುಂಗಿ ಊದಿದಾಗ ಆ ಹಗ್ಗ ಗಾಳಿಯಲ್ಲಿ ನೇರವಾಗಿ ನಿಲ್ಲುತ್ತ್ತಿತ್ತಂತೆ. ಆ ಹಗ್ಗವನ್ನೇರಿ ಬಾಲಕನೊಬ್ಬ ಮೇಲೆ ಹೋದಾಗ, ಅವನ ಕೈಕಾಲುಗಳು ಕಳಚಿ ಬೀಳುತ್ತಿದ್ದುವಂತೆ. ಅವನ್ನು ಮತ್ತೆ ಕೂಡಿಸಿ ಆ ಯಕ್ಷಿಣಿಗಾರ ಬಾಲಕನಿಗೆ ಮತ್ತೆ ಜೀವವನ್ನು ಕೊಡುತ್ತಿದ್ದನಂತೆ. ಇಂಥ ಪ್ರದರ್ಶನ ಇಂದಿಗೂ ಭಾರತೀಯ ಜಾದುಗಾರರಿಗೆ ಮಾತ್ರ ಸಾಧ್ಯವಿದ್ದು ಬೇರಾವ ಜಾದುಗಾರರಾಗಲೀ ಇಂಥವನ್ನು ಮಾಡಿದಲ್ಲಿ ಅಂಥವರಿಗೆ ವಿಶೇಷ ಪ್ರಶಸ್ತಿ, ಬಹುಮಾನಗಳು ಲಭಿಸುತ್ತವೆ ಎಂದು ಹೇಳಲಾಗುತ್ತಿದೆ. ಆದರೆ ಹಿಂದಿನ ಫಕೀರರು ನಿಜವಾಗಿಯೂ ಈ ರೀತಿಯ ಅದ್ಭುತವನ್ನು ಹೊರಾಂಗಣದಲ್ಲೇ ಮಾಡುತ್ತಿದ್ದರೇ ಅಥವಾ ನೋಡಿದವರು ತಮ್ಮ ಉತ್ಪ್ರೇಕ್ಷೆಯನ್ನೂ ಸೇರಿಸಿ ಕಟ್ಟುಕತೆ ಕಟ್ಟಿದರೇ ಎಂಬುದು ಇನ್ನೂ ವಿವಾದಾಸ್ಪದ. ಆದರೆ ದೂರದಲ್ಲಿ ಬಿದ್ದಿರುವ ರಟ್ಟಿನ ಬೊಂಬೆಗಳು ಎದ್ದು ಕೆಲಸ ಮಾಡುವುದು, ಪ್ರೇಕ್ಷಕರು ಎಸೆದ ಬೀಡಿಗಳು ಸಾಲಾಗಿ ನಿಂತು ಕವಾಯಿತು ಮಾಡುವುದು, ಬರಿ ಕೈಯನ್ನು ಹಿಂಡಿದಾಗ ತೀರ್ಥ ಸುರಿಯುವುದು-ಈ ಮೊದಲಾದ ಆಶ್ಚರ್ಯಗಳನ್ನು ಸಾರ್ವಜನಿಕ ಚೌಕಗಳಲ್ಲಿ ಪ್ರದರ್ಶಿಸುವ ಜಾದುಗಾರರನ್ನು ಇಂದಿಗೂ ಕಾಣಬಹುದು.

	ಅಮೆರಿಕದ ಹ್ಯಾರಿ ಹೂಡೀನೀ (1874-1926), ಭಾರತದ ಪಿ.ಸಿ.ಸರ್ಕಾರ್, ಭಾಗ್ಯನಾಥ್ ಗೋಗಿಯಾ ಪಾಶಾ, ಕೆ. ಲಾಲ್, ಪಿ.ಸಿ. ಸರ್ಕಾರ್ (ಕಿರಿಯ) ಮೊದಲಾದವರು ಜಾದುಗಾರರೆಂದು ಪ್ರಖ್ಯಾತರಾಗಿದ್ದಾರೆ. ಕರ್ನಾಟಕದ ಯಕ್ಷಿಣಿಗಾರರಲ್ಲಿ ಅಪ್ಪಯ್ಯ, ವಸಂತ ಕುಮಾರ್, ಹಕ್ಲಾ ಮುಂತಾದವರು ಹೆಸರುಗಳಿಸಿದ್ದಾರೆ.

	ಜಾದುವನ್ನು ಕುರಿತಂತೆ ಅದರಲ್ಲೂ ಮುಖ್ಯವಾಗಿ ಆಧುನಿಕ ಯಕ್ಷಿಣಿವಿದ್ಯೆಯನ್ನು ಕುರಿತಂತೆ ಪ್ರಮಾಣಗ್ರಂಥಗಳು ತೀರ ವಿರಳ. ಇದರ ಬಗ್ಗೆ ಹೆಸರಾಂತ ವಿಶ್ವಕೋಶಗಳಲ್ಲಿ ಉಲ್ಲೇಖವಿರುವುದು ಮಾತ್ರ ಕಂಡುಬಂದಿದೆ. ಪ್ರಾಚೀನ ಕಾಲದಲ್ಲಿ ಜಾದು ಬೆಳೆದ ಬಗೆಯನ್ನು ತಿಳಿಸಿಕೊಡುವಂಥ ಅಧ್ಯಯನಗಳನ್ನು ಇ.ಬಿ. ಟೇಲರ್, ಜೆ.ಜಿ.ಫ್ರೇಸರ್, ಇ.ಎ.ವೆಸ್ಟರ್ ಮಾರ್ಕ್, ಎಚ್.ಪಿ.ಇ. ಹ್ಯೂಬರ್ಟ್, ಎಂ.ಮಾಸ್, ಆರ್.ಆರ್.ಮಾರೆಟ್, ಬಿ.ಕೆ. ಮಲಿನೋವ್‍ಸ್ಕಿ ಮೊದಲಾದ ಆಸಕ್ತರು ನಡೆಸಿದ್ದಾರೆ. ಇವರ ಕೃತಿಗಳಲ್ಲಿ ಜಾದುವನ್ನು ಕುರಿತಂತೆ ವಿಮರ್ಶನಾತ್ಮಕ ಬರೆಹಗಳನ್ನು ಕಾಣಬಹುದು.

	ಮಾನಸಿಕವಾದ ಅಸ್ವಾಸ್ಥ್ಯಗಳ ಮೇಲೆ ಹಾಗೂ ಮನೋರೋಗಗಳ ಮೇಲೆ ಗಣನೀಯವಾದ ಪರಿಣಾಮವನ್ನುಂಟುಮಾಡುವುದಕ್ಕೆ ಈ ವಿದ್ಯೆಯ ಮತ್ತೊಂದು ಪ್ರಕಾರ ಸಮ್ಮೋಹನ ವಿದ್ಯೆ (ವಶೀಕರಣ) ಸಾಕಷ್ಟು ಶಕ್ತವಾಗಿದೆ. ಏಕೆಂದರೆ ವಶೀಕರಣದಿಂದ ಇನ್ನೊಬ್ಬರ ಮನಸ್ಸನ್ನು ತನ್ನ ವಶಕ್ಕೆ ತೆಗೆದುಕೊಂಡು ಪ್ರಭಾವವನ್ನು ಬೀರುವಂತೆಯೇ ಐಂದ್ರಜಾಲಿಕ ತನ್ನ ಸಾಮಥ್ರ್ಯದಿಂದ ಇನ್ನೊಬ್ಬರ ಮನಸ್ಸಿನ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತಾನೆ. ಆಗ ಒಂದಲ್ಲೊಂದು ಪ್ರಯೋಗದಿಂದ ಪ್ರೇಕ್ಷಕ ಪ್ರದರ್ಶನ ವಿದ್ಯೆಯ ಪ್ರಭಾವಕ್ಕೆ ಒಳಗಾಗುತ್ತಾನೆ. ಹಾಗೆಯೇ ಮನೋರೋಗಿಯಾದವ ಯಾವುದನ್ನು ಮೆಚ್ಚಿದ, ಯಾವುದನ್ನು ಕುತೂಹಲದಿಂದ ಬಯಸಿದ-ಎನ್ನುವುದರ ಮೂಲಕ ಆ ರೋಗವನ್ನು ನಿಧಾನಿಸಲೂ ಬಹುದಾಗಿದೆ. ಯಾವ ಕಾರಣದಿಂದ ಆ ಕಾಯಿಲೆ ಅವನಲ್ಲಿ ಉಂಟಾಗಿರಬಹುದು ಆ ಅಭಾವವನ್ನು ಪೂರೈಸಿಕೊಡುವಂಥ ಪ್ರಯೋಗಗಳನ್ನು ಮತ್ತೆ ಮತ್ತೆ ನಡೆಸಿ ಆ ದೌರ್ಬಲ್ಯವನ್ನು ಹೋಗಲಾಡಿಸುವುದಕ್ಕೂ ಇದು ಸಹಕಾರಿಯಾಗುತ್ತದೆ. ಇದರ ಮಹತ್ತ್ವವನ್ನು ಕಂಡು ಪರದೇಶಗಳಲ್ಲಿ ಈಗಾಗಲೇ ಈ ಕುರಿತಾದ ಸಂಶೋಧನೆಗಳು ಭರದಿಂದ ಸಾಗತೊಡಗಿದೆ. ಭಾರತದಲ್ಲೂ ಈ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.
(ಎಸ್.ಎಚ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ